ಫ್ರಾನ್ಜ್, ಕಾಫ್ಕ
	1883-1924. ಜರ್ಮನ್ ಭಾಷೆಯ ಹಾಗೂ ಜಗತ್ತಿನ ಪ್ರಸಿದ್ಧ ಲೇಖಕರಲ್ಲೊಬ್ಬ. ಯಹೂದಿ ಜೆಕ್ ಮನೆತನಕ್ಕೆ ಸೇರಿದ ಈತ 1883ರಲ್ಲಿ ಪ್ರಾಗ್ ನಗರದಲ್ಲಿ ಜನಿಸಿದ. ಇವನ ತಂದೆ ಶ್ರೀಮಂತ ವರ್ತಕನಾಗಿದ್ದ. ಸಾಹಿತ್ಯ ಅಥವಾ ವೈದ್ಯಶಾಸ್ತ್ರವನ್ನು ಅಭ್ಯಾಸ ಮಾಡಬೇಕೆಂಬ ಯೋಚನೆ ಇಟ್ಟುಕೊಂಡಿದ್ದ. ಕೊನೆಗೆ ಕಾನೂನುಶಾಸ್ತ್ರ ವ್ಯಾಸಂಗಮಾಡಿ ಪ್ರಾಗ್‍ನಲ್ಲಿನ ಜರ್ಮನ್ ಕಾರ್ಲ್‍ಫರ್ಡಿನಂಡ್ ವಿಶ್ವವಿದ್ಯಾಲಯದಿಂದ ಕಾನೂನುಶಾಸ್ತ್ರದಲ್ಲಿ ಡಾಕ್ಟೊರೇಟ್ ಪದವಿ ಪಡೆದು ಸುಮಾರು ಒಂದು ವರ್ಷಕಾಲ ಖಾಸಗಿ ವಕೀಲನಾಗಿ ಕೆಲಸಮಾಡಿದ. ಅನಂತರ ಕೆಲವು ತಿಂಗಳು ಒಂದು ಖಾಸಗಿ ಇನ್ಯೂರನ್ಸ್ ಕಂಪನಿಯಲ್ಲಿ ಕೆಲಸಮಾಡಿ, ಕೊನೆಗೆ ಸರ್ಕಾರ ಸ್ಥಾಪಿಸಿದ ಕಾರ್ಮಿಕರ ಇನ್ಯೂರನ್ಸ್ ಸಂಸ್ಥೆಯಲ್ಲಿ ಕೆಲಸಕ್ಕೆ ಸೇರಿಕೊಂಡು. ತನ್ನ ಬದುಕಿನ ಕೊನೆಯ ಕೆಲವು ವರ್ಷಗಳನ್ನು ಬಿಟ್ಟರೆ, ಕಾಫ್ಕ ತನ್ನಯುಷ್ಯ ಪೂರ್ತ ಇದೇ ವೃತ್ತಿಯಲ್ಲಿದ್ದ.

	ಕಾಫ್ಕ ರಚಿಸಿದ ಬಹುಪಾಲು ಸಾಹಿತ್ಯ ಪ್ರಕಟವಾದದ್ದು, ಪ್ರಸಿದ್ಧಿಗೆ ಬಂದದ್ದು ಈತ ತೀರಿಕೊಂಡ ಅನಂತರ. ಇಡೀ ಜೀವನವನ್ನು ಮದುವೆಯಾಗದೆ ಒಂಟಿಯಾಗಿ ಕಳೆದ ಕಾಫ್ಕ ತನ್ನ 43ನೆಯ ವಯಸ್ಸಿನಲ್ಲಿ ಕ್ಷಯರೋಗಕ್ಕೆ ತುತ್ತಾಗಿ ತೀರಿಕೊಂಡ. ಸಾಯುವಾಗ, ತನ್ನಿಂದ ರಚಿತವಾಗಿದ್ದು ಇನ್ನೂ ಹಸ್ತಪ್ರತಿಯ ರೂಪದಲ್ಲೇ ಇರುವ ಎಲ್ಲ ಸಾಹಿತ್ಯವನ್ನೂ ಸುಟ್ಟುಹಾಕಿ ನಾಶಪಡಿಸುವಂತೆ ತನ್ನ ಸ್ನೇಹಿತ ಮ್ಯಾಕ್ಸ್ ಬ್ರಾಂಡ್‍ಗೆ ತಿಳಿಸಿದ್ದ. ಆದರೆ ಆತ ಹಾಗೆ ಮಾಡದೆ ಕಾಫ್ಕನ ನಿಧನಾ ನಂತರ ಇವನ ಎಲ್ಲ ಕೃತಿಗಳನ್ನೂ ಸಂಪಾದಿಸಿ ಪ್ರಕಟಿಸಿದ.

	ಕಾಫ್ಕನದು ಒಂದು ಬಗೆಯ ಹತಾಶ ಬದುಕು. ಇಂಥ ಹತಾಶ ಬದುಕಿಗೆ ಕಾರಣವಾದ ಸಂಗತಿಗಳು ಅನೇಕವಾದರೂ ಮುಖ್ಯವಾದವೆಂದರೆ ಮಧ್ಯಮವರ್ಗದ ಬದುಕಿನ ದೈನಂದಿನ ಹೊರೆ, ತಂದೆಯೊಡನಿದ್ದ ಒಂದು ಬಗೆಯ ಭೀತಿಯ ಹಾಗೂ ಜುಗುಪ್ಸೆಯ ಸಂಬಂಧ. ಕಾಫ್ಕನಲ್ಲಿಯೇ ಕಂಡುಬರುವ ಅತಿ ವಿಚಿತ್ರವಾದ, ಕೆಲವೊಮ್ಮೆ ವಿಕೃತವೆನ್ನಿಸುವ ಸಂವೇದನಶೀಲತೆ. ಕಾಫ್ಕನೇ ವಿವರಿಸಿದಂತೆ ಇವನ ತಂದೆ ಕಾಫ್ಕನಿಗಿಂತ ತೀರ ಭಿನ್ನಪ್ರಕೃತಿಯ ವ್ಯಕ್ತಿಯಾಗಿದ್ದ. ಕಾಫ್ಕನಿಗೆ ವ್ಯಾವಹಾರಿಕ ದೃಷ್ಟಿಯಿಂದ ಜೀವನದಲ್ಲಿ ಯಶಸ್ವಿಯಾಗಬೇಕೆಂಬ ತುರಾತುರಿ ಇರಲಿಲ್ಲ. ಅಪ್ಪನ ಬದುಕಿನಲ್ಲಿ ಆ ತುರಾತುರಿ ಬಲು ಜೋರಾಗಿತ್ತು. ಬದುಕಿನಲ್ಲಿ ಸಾಮಾನ್ಯ ಅರ್ಥದಲ್ಲಿ ಯಶಸ್ವಿಯಾಗಬೇಕೆಂಬ ಹಂಬಲ ಅಪ್ಪನಲ್ಲಿ ತೀವ್ರವಾಗಿದ್ದರೆ, ಮಗನಲ್ಲಿ ದೈನಂದಿನ ಬದುಕಿನ ಸಾಮಾಜಿಕ ಆರ್ಥಿಕ ಹಣಾಹಣಿಯ ನಿರರ್ಥಕತೆಯ ಭಾವನೆ ಅಷ್ಟೇ ಪ್ರಮುಖವಾಗಿತ್ತು. ತಂದೆಯಲ್ಲಿ ಅಸಾಧಾರಣ ಶಕ್ತಿ, ಆರೋಗ್ಯ, ಆತ್ಮವಿಶ್ವಾಸ, ವ್ಯಾವಹಾರಿಕ ಜ್ಞಾನ, ಜಾಣ್ಮೆ, ತಾಳ್ಮೆ ಕೂಡಿದ್ದರೆ ಕಾಫ್ಕನಲ್ಲಿ ದೌರ್ಬಲ್ಯ, ಅಸಹನೆ, ಅನಾರೋಗ್ಯ, ಅನಾಸಕ್ತಿ, ತನ್ನ ಶಕ್ತಿ ಸಾಮಥ್ರ್ಯಗಳಲ್ಲಿ ನಂಬಿಕೆಯಿಲ್ಲದಿರುವಿಕೆ, ಸೋಲಿನ ಪ್ರವೃತ್ತಿ, ಕುಂದಿದ ಮನಸ್ಸು, ಭೀತಿಗ್ರಸ್ತನಡಿಗೆ, ಹತಾಶೆ, ಅತಿಯಾದ ಸಂವೇದನಶೀಲತೆ ತುಂಬಿಕೊಂಡಿದ್ದವು. ಇದೆಲ್ಲಕ್ಕಿಂತ ಹೆಚ್ಚಾಗಿ ತಂದೆಗೆ ಸಾಹಿತ್ಯದ ಬಗ್ಗೆ ಇದ್ದ ಅಸಡ್ಡೆ, ತನ್ನ ಬಗ್ಗೆ ಇದ್ದ ಅನುಕಂಪರಹಿತ ದೃಷ್ಟಿ. ಇಬ್ಬರೂ ಭಿನ್ನ ಮೌಲ್ಯಾನ್ವೇಷಣೆಯಲ್ಲಿ ತೊಡಗಿದವರು. ಈ ಬಗೆಯ ಸಂಘರ್ಷ ಕಾಫ್ಕನ ಸಾಹಿತ್ಯದ ಮೇಲೆ ಸಾಕಷ್ಟು ಪ್ರಭಾವ ಬೀರುವಲ್ಲಿ ಕಾರಣವಾಗಿದೆ. ಕಾಫ್ಕನೇ ತನ್ನ ತಂದೆಗೆ ಬರೆದ ದೀರ್ಘ ಪತ್ರವೊಂದರಿಂದ ಈ ಅಂಶ ನಿಚ್ಚಳವಾಗುತ್ತದೆ. ಆ ಪತ್ರದಲ್ಲಿ ಕಾಫ್ಕ ಹೀಗೆ ಬರೆದಿದ್ದಾನೆ. 'ನನ್ನ ಬರಹಗಳೆಲ್ಲ ನಿನ್ನ ಕುರಿತಾದದ್ದೇ; ನನ್ನ ಬರಹಗಳಲ್ಲಿ ನಾನು ಮಾಡಿದ್ದಾದರೂ ಏನು? ನಿನ್ನ ಮುಂದೆ ತೋಡಿಕೊಳ್ಳಬೇಕಾದ್ದನ್ನು ನನ್ನ ಬರವಣಿಗೆಯಲ್ಲಿ ತೋಡಿಕೊಂಡಿದ್ದೇನೆ, ಅಷ್ಟೆ. ಉದ್ದೇಶಪೂರ್ವಕವಾಗಿಯೇ ನಿನ್ನಿಂದ ಬಿಡುಗಡೆ ಪಡೆಯುವ ಪ್ರಯತ್ನವದು. ನನ್ನನ್ನು ಇಂತಹ ಪ್ರಯತ್ನದಲ್ಲಿ ತೊಡಗಿಸಲು ನೀನೇ ಕಾರಣ; ಆದರೆ ನನ್ನ ಬರವಣಿಗೆ ಬೆಳೆದುಬಂದು ರೀತಿ ಮಾತ್ರ ನಾನೇ ರೂಪಿಸಿದ್ದು.'

	ಕಾಫ್ಕನ ಬರಹದ ಅರ್ಥವನ್ನು ಅನೇಕ ವಿಮರ್ಶಕರು ಅನೇಕ ವಿಧದಲ್ಲಿ ಅನೇಕ ರೂಪದಲ್ಲಿ ಶೋಧಿಸಿದ್ದಾರೆ. ಇವನ ಬರಹದ ತಿರುಳು ಧಾರ್ಮಿಕ ತತ್ತ್ವವೆಂದು ಕೆಲವರು ಬಗೆದರೆ, ಇನ್ನು ಕೆಲವರು ಅದು ಅಸ್ತಿತ್ವವಾದದ ಪರಿಶೋಧನೆ ಎಂದು ಭಾವಿಸಿದ್ದಾರೆ. ಮತ್ತೆ ಕೆಲವರು ಅವನ ಬರಹದಲ್ಲಿ ಅತೀಂದ್ರಿಯ ಜ್ಞಾನದ ಹೊಳವನ್ನು ಕಂಡರೆ, ಇನ್ನು ಕೆಲವು ವಿಮರ್ಶಕರು ಮನೋವೈಜ್ಞಾನಿಕ-ಮಾನಸಿಕ ಅರ್ಥವನ್ನು ಕಷ್ಟಪಟ್ಟು ಹೊರಗೆಳೆಯಲು ಪ್ರಯತ್ನಿಸಿದ್ದಾರೆ. ಈ ಶತಮಾನದ ಪ್ರಾರಂಭವಾದ ದಶಕಗಳಲ್ಲಿ ಪಾಶ್ಚಾತ್ಯ ಸಮಾಜದಲ್ಲಿ ಸಾಂಪ್ರದಾಯಿಕ-ಸಂಸಾರಿಕ ಜೀವನದ ಪದ್ಧತಿಗಳು ಛಿದ್ರಗೊಂಡು ಔದ್ಯಮೀಕರಣ ಕ್ರಮೇಣ ಮನುಷ್ಯನ ಬದುಕನ್ನು ಆಕ್ರಮಿಸತೊಡಗಿದ್ದರ ಮಾನಸಿಕ ಪ್ರಭಾವವನ್ನು ಕೆಲವು ವಿಮರ್ಶಕರು ಗುರುತಿಸಿದ್ದಾರೆ. ಒಟ್ಟಿನಲ್ಲಿ ಮನುಷ್ಯನ ನಿರಂತರವಾದ ಸಂದಿಗ್ಧಸ್ಥಿತಿಯನ್ನು, ತನ್ನ ಒಡನಾಡಿಗಳಿಂದ ಮನುಷ್ಯ ದಿನೇ ದಿನೇ ದೂರಸರಿದು ಏಕಾಂಗಿಯಾಗಿ, ಒಂಟಿಯಾದ ಆದರೂ ಎಲ್ಲರ ನಡುವೆ ಬದುಕಬೇಕಾದ ನೈತಿಕ ಅನಿವಾರ್ಯಕತೆಯ ಮೂಲ ಸ್ಥಿತಿಯನ್ನು ಕಾಫ್ಕನ ಬರಹ ಸೃಷ್ಟಿಸುತ್ತದೆ__ಎಂಬ ವಿಷಯವಾಗಿ ಬಹುಪಾಲು ವಿಮರ್ಶಕರಲ್ಲಿ ಒಮ್ಮತವಿರುವುದನ್ನು ಕಾಣಬಹುದು.

	ಕಾಫ್ಕ ಬರೆದದ್ದು ಹೆಚ್ಚಿಲ್ಲವಾದರೂ ಬರೆದಷ್ಟು ಉತ್ತಮ ಸಾಹಿತ್ಯವಾಗಿ ವಿಶ್ವವಿಖ್ಯಾತವಾಗಿದೆ. ಈತ ಮೂರು ಕಾದಂಬರಿಗಳನ್ನು ಅನೇಕ ಸಣ್ಣಕಥೆಗಳನ್ನು ಬರೆದಿದ್ದಾನೆ. ದಿ ಟ್ರಯಲ್ (1925), ದಿ ಕ್ಯಾಸಲ್ (1926)-ಇವು ಕಾದಂಬರಿಗಳು. ದಿ ಮೆಟಮಾರ್ಫಸಿಸ್, ದಿ ಜಡ್ಡಮೆಂಟ್, ಇನ್ ದಿ ಪೀನಲ್ ಕಾಲೋನಿ, ಎ ಹಂಗರ್ ಆರ್ಟಿಸ್ಟ್-ಈ ಮೊದಲಾದ ಕಥೆಗಳು ಜಗತ್ತಿನ ಅತ್ಯುತ್ತಮ ಕಥೆಗಳೆಂದು ಪ್ರಸಿದ್ಧವಾಗಿವೆ.

	ಯಾವ ತಪ್ಪನ್ನೂ ಮಾಡದ ವ್ಯಕ್ತಿಯೊಬ್ಬನನ್ನು ಬಂಧಿಸಿ ಒಂದು ವರ್ಷಕಾಲ ನಿರಂತರವಾದ, ಅರ್ಥವೇ ಆಗದ, ಹಿಂದುಮುಂದಿಲ್ಲದ ವಿಚಾರಣೆಗೆ ಗುರಿಪಡಿಸಿ, ಮರಣದಂಡನೆ ವಿಧಿಸುವುದು `ದಿ ಟ್ರಯಲ್ ಕಾದಂಬರಿಯ ವಸ್ತು. ಆದರೆ ಮರಣದಂಡನೆಗೆ ಗುರಿಯಾದ ವ್ಯಕ್ತಿ ತನ್ನನ್ನು ಯಾವ ಕಾನೂನಿನ ಪ್ರಕಾರ ವಿಚಾರಣೆಗೆ ಗುರಿಪಡಿಸಿದ್ದಾರೆಂಬುದನ್ನು ತಿಳಿದುಕೊಳ್ಳಲಾಗದೆ ತೊಳಲಾಡುವುದು ಕಾದಂಬರಿಯ ಕೇಂದ್ರಬಿಂದು. `ಕೆ ಎಂಬ ವ್ಯಕ್ತಿಯೊಬ್ಬ ಗ್ರಾಮಸಮುದಾಯವೊಂದರ ಒಪ್ಪಿಗೆ ಪಡೆದು, ನಿಗೂಢ ಪರಮಾಧಿಕಾರದ ಮನೆಯಾದ `ದುರ್ಗವನ್ನು ಪ್ರವೇಶಿಸುವಲ್ಲಿ ಪಡುವ ವ್ಯರ್ಥಮಾನಸಿಕ ತೊಳಲಾಟ, ಹಿಂಸೆಯ ಚಿತ್ರಣ ದಿ ಕ್ಯಾಸಲ್ ಕಾದಂಬರಿಯಲ್ಲಿದೆ. ಮನುಷ್ಯನೊಬ್ಬ ದೈತ್ಯಾಕಾರದ ಹುಳುವಾಗಿ ರೂಪಾಂತರಗೊಂಡ ಮೇಲೆ ಆತ ಹಲವು ದಿನಗಳು ಬದುಕಿದ್ದು ಪಡುವ ಯಾತನೆ, ಮಾನಸಿಕ ಕ್ಷೋಭೆಯ ಚಿತ್ರಣ ದಿ ಮೆಟಮಾರ್ಫಸಿಸ್ ಕಥೆಯಲ್ಲಿ ಬರುತ್ತದೆ. ಜಗತ್ತಿನಾದ್ಯಂತ ಸಾಹಿತ್ಯವಲಯದಲ್ಲಿ ಬಹುಚರ್ಚಿತವಾಗಿರುವ ಕೃತಿಯಿದು. ಗ್ರಿಗೊರ್ ಸಂಸ ಒಬ್ಬ ಸಂಚಾರಿ ವ್ಯಾಪಾರಿ; ತಂದೆ, ತಾಯಿ, ಮತ್ತು ತಂಗಿಯ ಜೊತೆ ವಾಸಿಸುವವ. ತಂದೆ ಮಾಡಿದ ಸಾಲದ ಹೊರೆಯನ್ನು ಹೊತ್ತು, ಸಂಸಾರ ನಡೆಸುವ ಉದ್ದೇಶದಿಂದ ತನಗಿಷ್ಟವಿಲ್ಲದ ವ್ಯಾಪಾರೀ ವೃತ್ತಿ ಹಿಡಿದವ. ತಂದೆಯ ಸಾಲ ಮುಗಿದಕೂಡಲೇ ಆ ಅನಿಷ್ಟ ಕೆಲಸವನ್ನು ತೊರೆದು ಸ್ವತಂತ್ರನಾಗುವ ಹಂಬಲದಲ್ಲಿದ್ದವ; ತಂಗಿಯನ್ನು ಸಂಗೀತ ಶಾಲೆಗೆ ಕಳಿಸುವ ಯೋಚನೆಯಲ್ಲಿದ್ದವ. ಆದರೆ ಇದ್ದಕ್ಕಿದ್ದಂತೆ ಒಂದು ಬೆಳಗ್ಗೆ ಎದ್ದು ಕೆಲಸಕ್ಕೆ ಹೋಗಬೇಕಾಗಿದ್ದವ ಹಾಸಿಗೆಯಲ್ಲಿ ಹುಳುವಾಗಿ ರೂಪಾಂತರಗೊಂಡಿದ್ದು ವೇದ್ಯವಾಗುತ್ತದೆ. ಕಥೆ ಆರಂಭವಾಗುವಾಗಲೇ ಈ ರೂಪಾಂತರ ಮುಗಿದು ಹೋಗಿರುವುದರಿಂದ ಸಂಸ ಏಕೆ ಮತ್ತು ಹೇಗೆ ಹುಳುವಾದ_ಎಂಬುದರ ವಿವರಣೆಯನ್ನು ಕತೆಯಲ್ಲಿ ಕಾಣುವುದು ಸಾಧ್ಯವಿಲ್ಲ. ಅಲ್ಲದೆ ಇನ್ನೊಂದು ಮುಖ್ಯವಾದ ಸಂಗತಿಯೆಂದರೆ ಆತ ಹುಳುವಿನ ರೂಪಕ್ಕೆ ಮಾರ್ಪಾಡಾದರೂ ಮನುಷ್ಯನ ಆಲೋಚನೆ, ಭಾವನೆ ಪ್ರಕ್ರಿಯೆಗಳನ್ನು ಉಳಿಸಿಕೊಂಡಿರುತ್ತಾನೆ. ಕಥೆಯ ಬಹುಪಾಲು ಸಂಸನ ದೃಷ್ಟಿಯಲ್ಲೇ ತೆರೆದುಕೊಳ್ಳುತ್ತ ಹೋಗುತ್ತದೆ. ಆಗೀಗ ಅವನ ವರ್ತನೆ, ಭಾವನೆ, ಆಹಾರದ ರುಚಿ(ಇತ್ಯಾದಿಗಳಲ್ಲಿ ಮನುಷ್ಯತನ ಕ್ರಮೇಣ ಕುಂದುವಂತೆ ಕಂಡುಬಂದರೂ ಅದರ ಬಗ್ಗೆ ಅವನಲ್ಲೇ ಇರುವ ಪ್ರಜ್ಞೆಯಿಂದಾಗಿ ಆತ ತಿರುತಿರುಗಿ ಮಾನವೀಯ ವೃತ್ತಕ್ಕೆ ಹೊರಳಿಕೊಳ್ಳಲು ಪ್ರಯತ್ನಿಸುವುದು ವ್ಯಕ್ತವಾಗುತ್ತದೆ. ಕತೆಯಲ್ಲಿ ತುಂಬಿಕೊಂಡಿರುವ ಹಲವು ಬಗೆಯ ವಿಪರ್ಯಾಸಗಳಲ್ಲಿ ಇದೂ ಒಂದು. ಒಂದು ದೃಷ್ಟಿಯಿಂದ ಮನುಷ್ಯರಿಂದ ಪೂರ್ತಿ ದೂರ ಸರಿದೂ ಅವರ ನಡುವೆ ಬದುಕಲೇಬೇಕಾದ ನೈತಿಕ ಅನಿವಾರ್ಯತೆಯನ್ನು ಸಂಸನ ರೂಪಾಂತರ ಬಲು ಸಮರ್ಥವಾಗಿ ಚಿತ್ರಿಸುತ್ತದೆ.

	ಕಾಫ್ಕನ ಸಾಹಿತ್ಯ ಕನ್ನಡಕ್ಕೆ ಸಾಕಷ್ಟು ಅನುವಾದಗೊಂಡಿದೆ. ದಿ ಮೆಟಮಾರ್ಫಸಿಸ್ ಕಥೆಯನ್ನು ರೂಪಾಂತರ ಎಂಬ ಹೆಸರಿನಲ್ಲಿ ಗಿರಿ, ಜಿ.ಎನ್. ರಂಗನಾಥರಾವ್ ಸ್ವತಂತ್ರವಾಗಿ ಅನುವಾದಿಸಿದ್ದಾರೆ. ಕಾಫ್ಕ್‍ನ ಆಯ್ದ ಕೆಲವು ಕಥೆಗಳನ್ನು ಕೃಷ್ಣಮೂರ್ತಿ ಚಂದರ್ ಅವರು `ಕಾಫ್ಕಾನ ಕಥೆಗಳು ಎಂಬ ಹೆಸರಿನಲ್ಲಿ ಅನುವಾದಿಸಿದ್ದಾರೆ. ದೇ.ನ. ಶ್ರೀನಿವಾಸಮೂರ್ತಿಯವರು ದಿ ಕ್ಯಾಸಲ್ ಕಾದಂಬರಿಯನ್ನು ದುರ್ಗ ಎಂಬ ಹೆಸರಿನಲ್ಲಿ ಅನುವಾದಿಸಿದ್ದಾರೆ.
(ಜಿ.ಎಚ್‍ಇ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ